Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೇಡ್ ಇನ್ ಬೆಂಗಳೂರು ಐಟಿ ಹುಡುಗನ ಸ್ಟಾರ್ಟಪ್ ಕಥೆ 4/5 ****
Posted date: 31 Sat, Dec 2022 11:01:27 AM
ಮನುಷ್ಯ ಜೀವನದಲ್ಲಿ ಮುಂದೆ ಬರಬೇಕೆಂದರೆ ಏನಾದರೂ ಮಾಡಲೇಬೇಕು. ಅದೂ ಬೆಂಗಳೂರಿನಂಥ ಮೆಟ್ರೋಸಿಟಿಯಲ್ಲಿ ಹಣ ಗಳಿಸಲು ನೂರಾರು ದಾರಿಗಳಿವೆ. ಮೇಡ್ ಇನ್ ಬೆಂಗಳೂರು ಅಂಥ ಪ್ರಯತ್ನದಲ್ಲಿ ಮೊದಲು  ಸೋಲುಕಂಡು ನಂತರ ಯಶಸ್ವಿಯಾದ ಯುವಕನ ಕಥೆ. 
 
ನಾಯಕ ಸುಹಾಸ್(ಮಧುಸೂದನ್ ಗೋವಿಂದ್) ಎಂಜಿನಿಯರಿಂಗ್ ಮುಗಿಸಿ  ಸ್ಟಾರ್ಟಪ್ ಕಂಪನಿ ಆರಂಭಿಸಲು ಮುಂದಾಗುತ್ತಾನೆ. ಅದಕ್ಕೆ ಬಂಡವಾಳ ಬೇಕಲ್ಲ‌. ಮದ್ಯಮವರ್ಗದ ಕುಟುಂಬದಿಂದ ಬಂದ ಸುಹಾಸ್  50 ಲಕ್ಷ  ಬಂಡವಾಳ‌ ಹೂಡುವ ಇನ್ ವೆಸ್ಟರ್ಸ್ ಹುಡುಕಲು ಎಷ್ಟೆಲ್ಲ‌ ಹರಸಾಹಸ ಮಾಡುತ್ತಾನೆ, ಹೇಗೆಲ್ಲ ಕನ್ವೀನ್ಸ್ ಮಾಡುತ್ತಾನೆ, ಎಂಬುದನ್ನು ಪ್ರೇಕ್ಷಕರ‌ ಮನಮುಟ್ಟುವ ಹಾಗೆ ನಿರ್ದೇಶಕ ಪ್ರದೀಪ್ ಶಾಸ್ತ್ರಿ ತೋರಿಸಿದ್ದಾರೆ. ಮಾನಸಿಕವಾಗಿಯೂ ನೋವು ಅನುಭವಿಸಿ, ಕೊನೆಗೆ ತನ್ನ ಪ್ರಯತ್ನದಲ್ಲಿ ಎಷ್ಟರಮಟ್ಟಿಗೆ ಗೆಲುವು ಸಾಧಿಸುತ್ತಾನೆ ಎನ್ನುವುದೇ ಈ ಚಿತ್ರದ ಒನ್ ಲೈನ್ ಸ್ಟೋರಿ. ತನ್ನದೇ ಆದ ಸ್ಟಾರ್ಟಪ್ ಕಂಪನಿ ಪ್ರಾರಂಭಿಸಿ  ಲಕ್ಷಾಂತರ ಗಳಿಕೆ ಮಾಡಬಹುದೆಂದು ರೈತರಿಗೆ ಅನುಕೂಲವಾಗುವಂಥ ಆಪ್ ಡೆವಲಪ್ ಮಾಡಲು ಹೊರಡುತ್ತಾನೆ.ಆತನ  ಹುಡುಕಾಟ ಇಲ್ಲಿಂದ ಆರಂಭವಾಗುತ್ತದೆ, ಕೊನೆಗೂ ಗುಜರಾತಿ ಮೂಲಕ ಶ್ರೀಮಂತ ಉದ್ಯಮಿ ಪ್ರಹ್ಲಾದ್ ಹಿರಾನಂದಾನಿ (ಅನಂತನಾಗ್) ನಾಯಕನ ಐಡಿಯಾಲಜಿ ಮೇಲೆ 50 ಲಕ್ಷ ಇನ್‌ವೆಸ್ಟ್ ಮಾಡಲು ಮುಂದಾಗುತ್ತಾರೆ, ಆದರೆ ಸ್ನೇಹಿತ ನೀಡಿದ ಸಲಹೆಯಂತೆ ನಾಯಕ ನನಗೆ ನಗದು ಬೇಡ, ಚೆಕ್ ರೂಪದಲ್ಲಿ ಹಣ ನೀಡಿ ಎಂದು ಹಣ ತೆಗೆದುಕೊಳ್ಳಲು ನಿರಾಕರಿಸುತ್ತಾನೆ, ಆಗ ಲಕ್ಷ್ಮಿ ತಾನಾಗೇ ಒಲಿದು ಬಂದಾಗ ನೀನು ತಿರಸ್ಕರಿಸುತ್ತಿದ್ದೀಯ, ನೀನು ಮತ್ತೆ ಹಣ ಬೇಕೆಂದು ಬಂದರೂ ನಾನು ಕೊಡುವುದಿಲ್ಲ ಎಂದು ಹಿರಾನಂದಾನಿ ಹೇಳಿಕಳಿಸುತ್ತಾನೆ.
 
ನಂತರ ಸುಹಾಸ್  ಎಷ್ಟೇ ಪ್ರಯತ್ನಿಸಿದರೂ ಒಬ್ಬ ಇನ್‌ವೆಸ್ಟರ್   ಕೂಡ ಸಿಗುವುದಿಲ್ಲ,  ಕೊನೆಗೆ ತನ್ನ ತಂದೆ(ಮಂಜುನಾಥ ಹೆಗ್ಡೆ)ಗೆ ಗೊತ್ತಿರುವ ಗ್ಯಾಂಗ್ ಸ್ಟರ್ ರೆಡ್ಡಿ (ಸಾಯಿಕುಮಾರ್) ಬಳಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ, ವರ್ಷದವರೆಗೆ ಬಡ್ಡಿಯಲ್ಲದೆ ೫೦ ಲಕ್ಷ ಇನ್‌ವೆಸ್ಟ್ ಮಾಡಲು ಒಪ್ಪುವ ರೆಡ್ಡಿ, ಕಂಡೀಷನ್ ಮೇಲೆ ಸುಹಾಸ್‌ಗೆ ಹಣ ನೀಡುತ್ತಾನೆ. ಹೇಗೂ ಲಾಭ ಬಂದೇ ಬರುತ್ತೆ ಎನ್ನುವ ವಿಶ್ವಾಸ ಹೊಂದಿದ್ದ ಸುಹಾಸ್ ತನ್ನ ಸ್ನೇಹಿತರ ಜೊತೆಗೂಡಿ ಕಂಪನಿ ಆರಂಭಿಸುತ್ತಾನೆ. ಸುಹಾಸ್ ಡೆವಲಪ್ ಮಾಡಿದ ಆಪ್ ಜನ ಎಷ್ಟು ಡೌನ್‌ಲೋಡ್ ಮಾಡಿಕೊಳ್ಳುತ್ತಾರೋ ಅದು  ಸುಹಾಸ್‌ಗೆ ಲಾಭವಾಗಿ ಸೇರುತ್ತದೆ, ಆದರೆ ಆರಂಭದಲ್ಲಿ ಜನ ಇದರ ಬಗ್ಗೆ ಆಸಕ್ತಿ ತೋರಿಸುವುದಿಲ್ಲ, ಆಗ ಸುಹಾಸ್ ಅಂಡ್ ಟೀಂ  ಜನರ ಬಳಿಗೇ ಹೋಗಿ ಹೊಸ ಆಪ್ ಅನುಕೂಲತೆಗಳ ಕುರಿತು ಮನವರಿಕೆ ಮಾಡುತ್ತಾರೆ. ಆಗ ಸ್ವಲ್ಪ ಚೇತರಿಕೆ  ಕಾಣುತ್ತದೆ. ಆಫೀಸ್ ಎಂದಮೇಲೆ ಒಬ್ಬ ಲೇಡಿ ಅಸಿಸ್ಟೆಂಟ್ ಇರಬೇಕೆಂದು  ನಿಧಿ (ಹಿಮಾಂಶಿ ವರ್ಮ)  ಎಂಬ ಸುಂದರ ಯುವತಿಯನ್ನು ಅಪಾಯಿಂಟ್ ಮಾಡಿಕೊಳ್ಳುತ್ತಾರೆ, ಆನಂತರ ಅವರ ಕಂಪನಿ ಮತ್ತಷ್ಟು ಪ್ರಚಾರ ಪಡೆದುಕೊಳ್ಳುತ್ತದೆ, ನಿಧಿ ತನ್ನ ಬುದ್ದಿವಂತಿಕೆಯಿಂದ ಸುಹಾಸ್‌ಗೆ ಹತ್ತಿರವಾಗುತ್ತಾಳೆ, ಇಬ್ಬರೂ ಪರಸ್ಪರ ಲವ್ ಮಾಡುತ್ತಾರೆ.
 
ಈ ನಡುವೆ ಲಕ್ಷ ಸಂಬಳ ಕೊಟ್ಟು ಒಬ್ಬ ಖ್ಯಾತ ಸಿಂಗರ್‌ನ್ನೂ ಕಂಪನಿ ಪ್ರಚಾರಕ್ಕೆ ರಾಯಭಾರಿಯಾಗಿ ಬಳಸಿಕೊಳ್ಳುತ್ತಾರೆ. ಆನಂತರ ಚಿತ್ರಕಥೆ  ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತದೆ, ಅನಿರೀಕ್ಷಿತ  ಘಟನೆಯೊಂದು  ನಡೆದು  ಸುಹಾಸ್ ಬೀದಿಗೆ ಬರುತ್ತಾನೆ. ಸ್ನೇಹಿತರೂ ದೂರಾಗುತ್ತಾರೆ. ಇತ್ತ ರೆಡ್ಡಿ ಕೊಟ್ಟ ವರ್ಷದ ವಾಯಿದೆಯೂ ಮುಗಿಯುತ್ತಾ ಬರುತ್ತದೆ. ಕೊನೆಗೆ ಸುಹಾಸ್ ಹಣ ಹೊಂದಿಸಲು ಬೇರೆ ಉಪಾಯ ಕಾಣದೆ  ದರೋಡೆ ಮಾಡಲು ಮುಂದಾಗುತ್ತಾನೆ, ಮುಂದೆ ಸುಹಾಸ್ ಜೀವನದಲ್ಲಿ  ನಡೆಯುತ್ತದೆ ಎಂದು  ತಿಳಿಯಬೇಕಾದರೆ ನೀವೆಲ್ಲ ಥೇಟರಿಗೆ ಹೋಗಿ ಮೇಡ್ ಇನ್ ಬೆಂಗಳುರು ಚಿತ್ರವನ್ನು ವೀಕ್ಷಿಸಲೇಬೇಕು, ಚಿತ್ರದ ನಾಯಕ ಮಧುಸೂದನ್ ಉತ್ತಮ ಅಭಿನಯ ನೀಡುವ ಮೂಲಕ ಗಮನ ಸೆಳೆಯುತ್ತಾರೆ. ಅದು ಬಿಟ್ಟರೆ ಗುಜರಾತಿ ಉದ್ಯಮಿಯಾಗಿ ಅನಂತನಾಗ್, ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಸಾಯಿಕುಮಾರ್ ಅವರ ಪ್ರಬುದ್ದ ಅಭಿನಯವಿದೆ. ನಾಯಕನ ತಂದೆ ತಾಯುಯಾಗಿ ಮಂಜುನಾಥ ಹೆಗ್ಡೆ,  ಸುಧಾ ಬೆಳವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. 
 
ಅಶ್ವಿನ್ ಪಿ. ಕುಮಾರ್  ಅವರ ಸಂಗೀತ ಈ ಚಿತ್ರದ ಹೈಲೈಟ್,  ಪ್ರದೀಪ್‌ಶಾಸ್ತ್ರಿ  ಅವರ ಅಚ್ಚುಕಟ್ಟಾದ ನಿರ್ದೇಶನ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೇ ಕೊಂಡೊಯ್ಯುತ್ತದೆ, ನಿರ್ಮಾಪಕ ಬಾಲಕೃಷ್ಣ ಅವರು ಚಿತ್ರಕ್ಕೆ ಧಾರಾಳವಾಗಿ ಖರ್ಚು ಮಾಡಿದರುವುದು ಪ್ರತಿ ಫ್ರೇಮ್  ಗಳಲ್ಲಿ  ಎದ್ದುಕಾಣುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೇಡ್ ಇನ್ ಬೆಂಗಳೂರು ಐಟಿ ಹುಡುಗನ ಸ್ಟಾರ್ಟಪ್ ಕಥೆ 4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.